ಕಾಲಜನ್

 ಸ್ಕ್ಲೆರೋಪ್ರೋಟೀನ್ಸ್ ಅಥವಾ ಆಲ್ಬ ಮಿನಾಯ್‍ಡ್ಸ್ ವರ್ಗಕ್ಕೆ ಸೇರಿದ ಪ್ರೋಟೀನ್. ಇದು ವಿಶಿಷ್ಟವಾಗಿ ಕಶೇರುಕಗಳ ಕಂಡರ (ಟೆಂಡನ್), ಮೃದು ಮೂಳೆ, ಮೂಳೆ ಮತ್ತು ಚರ್ಮದಲ್ಲಿ ನೀಳ ಎಳೆಯ ರೂಪದಲ್ಲಿ ಶೇಖರವಾಗಿರುತ್ತದೆ. ನೀಳ ಎಳೆಯಂತಿರುವುದರಿಂದ ಇದು ದೇಹಭಾಗಗಳ ರಚನೆಗೆ ಅನುಕೂಲವಾಗಿದೆ. ರಾಸಾಯನಿಕ ನೀರಿನಲ್ಲಿ ಮತ್ತು ಉಪ್ಪಿನ ದ್ರಾವಣದಲ್ಲಿ ಕಾಲಜನ್ ವಿಲೀನವಾಗುವುದಿಲ್ಲ. ದುರ್ಬಲ ಆಮ್ಲ ಮತ್ತು ಕ್ಷಾರಗಳಲ್ಲಿ ಊದಿಕೊಳ್ಳುತ್ತದೆ. ಆದರೆ ವಿಲೀನವಾಗುವಂತೆ ಕಂಡಿಲ್ಲ. ನೀರಿನಲ್ಲಿ ಲಘುವಾಗಿ ಕುದಿಸುವುದರಿಂದ, ಹೆಚ್ಚು ಒತ್ತಡದ ನೀರಾವಿಯಿಂದ ಅಥವಾ ದುರ್ಬಲ ಆಮ್ಲಗಳೊಡನೆ ಕುದಿಸುವುದರಿಂದ ಜಲವಿಶ್ಲೇಷಣೆಗೊಳಪಡಿಸಿದರೆ ಜಿಲಾಟಿನ್ ಎಂಬ ಮತ್ತೊಂದು ಪ್ರೋಟೀನ್ ಆಗಿ ಪರಿವರ್ತನೆಗೊಳ್ಳುತ್ತದೆ.

 ಕಾಲಜನಿನಲ್ಲಿ ಹೈಡ್ರಾಕ್ಸಿ ಅಮೈನೋ ಆಮ್ಲ ಹೈಡ್ರಾಕ್ಸಿ ಪ್ರೋಟೀನಿನ ಅಂಶ ನೂರಕ್ಕೆ 13.5±0.24. ಈ ವಿಶಿಷ್ಟತೆ ಪ್ರಾಣಿಗಳ ಅಂಗಾಂಗಗಳ ಕಾಲಜನ್ ಪ್ರಮಾಣ ವಿಶ್ಲೇಷಣ ವಿಧಾನವೊಂದರ ಆಧಾರವಾಗಿದೆ. ಕಾಲಜನ್ ಮುಖ್ಯವಾಗಿ ಜಿಲಾಟಿನ್ ತಯಾರಿಕೆಯಲ್ಲಿ ಉಪಯೋಗವಾಗುವುದು.  

(ಎಲ್.ಎ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ